
Parimalada Payana – Kavya Gayana – Vyakhyana


“ಪರಿಮಳದ ಪಯಣ : ಕಾವ್ಯ ಗಾಯನ – ವ್ಯಾಖ್ಯಾನ” ಕಾರ್ಯಕ್ರಮದ ವರದಿ
ದಿನಾಂಕ 08-04-2026 ರ ಬುಧವಾರ ಬೆಳಗ್ಗೆ 10 ಗಂಟೆಗೆ ಸಂತ ಫಿಲೋಮಿನಾ ಕಾಲೇಜಿನ ಸಭಾಂಗಣದಲ್ಲಿ ಕನ್ನಡ
ವಿಭಾಗದ ವತಿಯಿಂದ “ಪರಿಮಳದ ಪಯಣ: ಕಾವ್ಯ ಗಾಯನ -ವ್ಯಾಖ್ಯಾನ” ಎಂಬ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು. ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರನ್ನು ಕನ್ನಡ
ವಿಭಾಗದ ಮುಖ್ಯಸ್ಥರಾದ ಡಾ.ಸದೆಬೋಸ್ ಎ.ಟಿ ಇವರು ಪ್ರಾಸ್ತಾವಿಕ ಮಾತುಗಳೊಂದಿಗೆ ಬರಮಾಡಿಕೊಂಡರು. ಈ
ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಕಾಲೇಜಿನ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಹಿರಿಯ
ರಂಗಕರ್ಮಿಗಳು ಆಗಿರುವ ಪ್ರೊ ಸಿ.ವಿ ಶ್ರೀಧರ ಮೂರ್ತಿ ಇವರು ಉದ್ಘಾಟಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸಂತ ಫಿಲೋಮಿನಾ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನದ
ಬದುಕಿನ ಅಮೂಲ್ಯ ಕ್ಷಣಗಳನ್ನು ಹಂಚಿಕೊಂಡರು. ಕಾವ್ಯ ಮತ್ತು ನಾಟಕ ಕ್ಷೇತ್ರದ ಮಹತ್ವವನ್ನು ತಿಳಿಸಿಕೊಟ್ಟರು.
ನಂತರ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ರೆಕ್ಟರ್ ರವರಾದ ರೆ.ಫಾ.ಡಾ.ಲೂರ್ದ್ ಪ್ರಸಾದ್ ಜೋಸೆಫ್ ಇವರು
ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಶ್ರೀಮತಿ ಶುಭಾ ರಾಘವೇಂದ್ರ ಮತ್ತು ತಂಡದವರು ಕನ್ನಡದ ಸುಪ್ರಸಿದ್ದ
ಕವಿಗಳ ಭಾವಗೀತೆಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರಿಗೆ ಗಾಯನದ ರಸದೌತಣವನ್ನು ಉಣಬಡಿಸಿದರು.
ಇವರು ಹಾಡಿದ ಪ್ರತಿಯೊಂದು ಗೀತೆಗಳಿಗೂ ನಾಡಿನ ಹೆಸರಾಂತ ಸಂಸ್ಕೃತಿ ಚಿಂತಕರಾದ ಪ್ರೊ. ಎಂ ಕೃಷ್ಣೇಗೌಡರು
ಅರ್ಥಪೂರ್ಣ ವ್ಯಾಖ್ಯಾನವನ್ನು ಅರುಹಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕ್ಯಾಂಪಸ್ ಆಡಳಿತಾಧಿಕಾರಿಗಳಾದ ರೆ.
ಫಾ.ಜ್ಞಾನ ಪ್ರಗಾಸಂ, ಪ್ರಾಂಶುಪಾಲರಾದ ಡಾ. ರವಿ ಜೆ.ಡಿ ಸಲ್ಡಾನ್ಹಾ ಇವರು ಉಪಸ್ಥಿತರಿರುವರು. ಕಾರ್ಯಕ್ರಮವನ್ನು
ಕನ್ನಡ ವಿಭಾಗದ ಶ್ರೀಮತಿ ಮೇರಿ ನಿವೇದಿತ ಇವರು ಸೊಗಸಾಗಿ ನಿರೂಪಿಸಿದರು ಹಾಗೂ ಡಾ. ಶಿವರಾಜು .ಎಸ್
ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರನ್ನು ವಂದಿಸಿದರು.




