Back

ಹಿಂದಿನ ಧರ್ಮಾಧ್ಯಕ್ಷರುಗಳು
ಸಂತ ಫಿಲೋಮಿನಾ ಕಾಲೇಜು ಈಗ ಅಮೃತ ಮಹೋತ್ಸವ ಆಚರಿಸಿಕೊಳ್ಳಲು ಸಜ್ಜಾಗಿದ್ದು, 2020-2021ನೇ ವರ್ಷ ಹಲವು ಹೆಗ್ಗುರುತುಗಳನ್ನು ಕಾಣಬಹುದಾಗಿದೆ. ಜಗತ್ತಿನಾದ್ಯಂತ ಶೈಕ್ಷಣಿಕ ಸಂಸ್ಥೆಗಳು ಕೋವಿಡ್-19 ಪಿಡುಗನ್ನು ಎದುರಿಸುತ್ತಿದ್ದು, ನಮ್ಮ ಕಾಲೇಜು ಸಹ ಈ ಸವಾಲನ್ನು ಮೆಟ್ಟಿನಿಲ್ಲಬೇಕಿದೆ. ಇಂತಹ ಅಪಾಯದ ಪರಿಸ್ಥಿತಿಯನ್ನು ಎದುರಿಸಲು ಸಮರ್ಪಣಾ ಭಾವ ಮತ್ತು ಸಾಮೂಹಿಕ ಪ್ರಯತ್ನ ಅತ್ಯಗತ್ಯ.
ಸತತ 75 ವರ್ಷಗಳ ಕಾಲ ಸಂತ ಫಿಲೋಮಿನಾ ಸಂಸ್ಥೆಯನ್ನು ಅತ್ಯಂತ ಸಮರ್ಪಣಾ ಭಾವದಿಂದ ಕಟ್ಟಿ, ಪೋಷಿಸಲಾಗಿದೆ. ಈವರೆಗೆ ಸಂಸ್ಥೆಗಾಗಿ ದುಡಿದ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತಗಾರರಿಗೆ ಇದರ ಯಶಸ್ಸು ಸಲ್ಲಬೇಕು. ಇಂದಿನ ಪೀಳಿಗೆ ಅವರೆಲ್ಲರ ಪರಿಶ್ರಮವನ್ನು ಪ್ರೀತಿಯಿಂದ ಗುರುತಿಸುತ್ತಿದೆ.


ರೆವರೆಂಡ್.ಡಾ. ರೆನೆ ಫ್ಯೂಗಾ- ಸ್ಥಾಪಕ ಪೋಷಕ (1946-1964)


ಬಿಷಪ್ ರೆನೆ ಜೀನ್ ಬ್ಯಾಪ್ಟಿಸ್ಟ್ ಜಮ್ರ್ಮೈನ್ ಫ್ಯೂಗಾ, ಅವರನ್ನು ಅಕ್ಕರೆಯಿಂದ ಬಿಷಪ್ ಫ್ಯೂಗಾ ಎಂದು ಕರೆಯಲಾಗುತ್ತಿತ್ತು. ಇವರು ಅವಿಭಜಿತ ಮೈಸೂರು ಡಯಾಸಿಸ್‍ನ ಮೊದಲ ಬಿಷಪ್ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಸಂಸ್ಥಾಪಕ ಮತ್ತು ಪೋಷಕರೂ ಹೌದು. ಮೈಸೂರು ಡಯಾಸಿಸ್‍ನ ಮುಖ್ಯ ಕಚೇರಿ ಮೈಸೂರಿನಲ್ಲಿತ್ತು. 1941ರಲ್ಲಿ ಇವರನ್ನು ಪವಿತ್ರ ಬಿಷಪ್ ಎಂದು ಘೋಷಿಸಲಾಯಿತು. ಫ್ಯೂಗಾ 1962ರಲ್ಲಿ ನಿವೃತ್ತರಾಗುವವರೆಗೂ ಮೈಸೂರು ಡಯಾಸಿಸ್‍ನ ಪೀಠಾಧಿಪತಿಯಾಗಿದ್ದರು. ನಿವೃತ್ತಿಯ ನಂತರವೂ ಮತ್ತೆರಡು ವರುಷ ಬಿಷಪ್ ಆಗಿ ಮುಂದುವರಿದರು. 1964ರಲ್ಲಿ ಅವರು ಮೃತರಾದರು. ಮಿಷನ್ಸ್ ಎಟ್ರಾನಂಜರ್ಸ್ ಡೆ ಪ್ಯಾರಿಸ್ (ಎಂಇಪಿ), ಪ್ಯಾರಿಸ್ ಮಿಷನ್ ಸೊಸೈಟಿಯು 18ನೇ ಶತಮಾನದ ನಂತರದ ಕಾಲಘಟ್ಟದಲ್ಲಿ ಭಾರತಕ್ಕೆ ಪಾದ್ರಿಗಳನ್ನು ಕಳುಹಿಸಲು ಆರಂಭಿಸಿತು. 1886ರಲ್ಲಿ ಮೈಸೂರು ಡಯಾಸಿಸ್‍ನ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಆರಂಭವಾಯಿತು. ಎಂಇಪಿಯ ಫಾದರ್‍ಗಳು ಸಂತ ಜೋಸೆಫ್ ಕಾಲೇಜು, ಸಂತ ಜೋಸೆಫ್ ಯುರೋಪಿಯನ್ ಮತ್ತು ಇಂಡಿಯನ್ ಹೈಸ್ಕೂಲ್ ಸೇರಿದಂತೆ ಹಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದರು. ರೆವರೆಂಡ್ ಫಾ. ರೆನೆ ಫ್ಯೂಗಾ, ತಮ್ಮ 24ನೇ ವಯಸ್ಸಿಗೆ ಫ್ರಾನ್ಸ್‍ನಲ್ಲಿ ಪಾದ್ರಿಯ ದೀಕ್ಷೆ ಪಡೆದರು. ಎಂಇಪಿ ಸೇರಿ, 1913ರಲ್ಲಿ ಭಾರತಕ್ಕೆ ಬಂದರು. ಮೈಸೂರು ಡಯಾಸಿಸ್‍ನ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದರು. ಹಲವು ಹುದ್ದೆಗಳನ್ನು ನಿಭಾಯಿಸಿರುವ ಇವರು, ಮದ್ರಾಸ್ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿದ್ದ ಬೆಂಗಳೂರಿನ ಸಂತ ಜೋಸೆಫ್ ಕಾಲೇಜಿನ ಫ್ರೆಂಚ್ ವಿಭಾಗದ ಮುಖ್ಯಸ್ಥರಾಗಿದ್ದರು. ಮಾತೃಭಾಷೆ ಫ್ರೆಂಚ್ ಜೊತೆಗೆ ಆಂಗ್ಲ, ಕನ್ನಡ, ತಮಿಳು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದರು.
ನಂತರ, 1929ರಲ್ಲಿ ಮಹಾರಾಜ ಕಾಲೇಜಿನ ಫ್ರೆಂಚ್ ವಿಭಾಗದ ಮುಖ್ಯಸ್ಥರನ್ನಾಗಿ ಬಿಷಪ್ ಫ್ಯೂಗಾ ಅವರನ್ನು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯಾರ್ ನೇಮಕ ಮಾಡಿದರು. ಹೀಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ಗುರುತನ್ನು ಸ್ಥಾಪಿಸಲು ಅವಕಾಶ ದೊರೆಯಿತು. 1940ರಲ್ಲಿ ಶ್ರೀ ಚಾಮರಾಜ ಒಡೆಯಾರ್ ಮೈಸೂರಿನ ಮಹಾರಾಜರಾದರು. ಅಂದಿನಿಂದ ಬಿಷಪ್ ಫ್ಯೂಗಾರ ಕೊನೆಯ ಗಳಿಗೆಯವರೆಗೂ ಮಹಾರಾಜರ ಕುಟುಂಬದೊಂದಿಗೆ ಬಾಂಧವ್ಯ ಮುಂದುವರೆಯಿತು. ಅವರ ಕಾಲಾನಂತರವೂ ಮುಂದೆ ಬಂದ ಬಿಷಪ್‍ರ ಜೊತೆ ಮಹಾರಾಜರ ಕುಟುಂಬ ಅದೇ ನಂಟನ್ನು ಹೊಂದಿದೆ.
1931ರಿಂದ 1941ರ ಅವಧಿಯಲ್ಲಿ ಸಂತ ಫಿಲೋಮಿನಾ ಕಾಲೇಜಿನ ಪ್ಯಾರಿಷ್ ಪಾದ್ರಿಯಾಗಿ ಸೇವೆಸಲ್ಲಿಸಿದರು. ನಂತರ ಕ್ಯಾಥಡ್ರಲ್ ಆಗಿ ಕಾರ್ಯನಿರ್ವಹಿಸಿದರು. 1941ರಲ್ಲಿ ಮೈಸೂರು ಕೇಂದ್ರ ಕಚೇರಿಯ ಬಿಷಪ್ ಆಗಿ ನೇಮಕಗೊಂಡು, ಗೋಥಿಕ್ ರಚನೆಯ ಕಟ್ಟಡ ನಿರ್ಮಿಸಿದರು. ಹೊಸದಾಗಿ ಡಯಾಸಿಸ್‍ನ ಚುಕ್ಕಾಣಿ ಹಿಡಿದ ಬಿಷಪ್‍ಗೆ ಧಾರ್ಮಿಕ ಕೆಲಸಗಳ ಜೊತೆಗೆ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡಬೇಕು ಎಂಬುದರ ಅರಿವಿತ್ತು. 1942ರಲ್ಲಿ ಸಂತ ಫಿಲೋಮಿನಾ ಪ್ರೌಢಶಾಲೆಯನ್ನು ಸ್ಥಾಪಿಸಿದರು. ಅದಾಗಲೇ ಮೈಸೂರಿನಲ್ಲಿ ಇಂಟರ್‍ಮೀಡಿಯೇಟ್, ವಿಜ್ಞಾನ ಮತ್ತು ಕಲಾ ಪದವಿ ಕಾಲೇಜುಗಳನ್ನು ತೆರೆಯಲು ಯೋಜನೆ ಸಿದ್ದವಾಗಿತ್ತು. ವಿಜ್ಞಾನ ಮತ್ತು ಕಲಾ ಪದವಿ ಕಾಲೇಜು ಆರಂಭಿಸಲು ಕಟ್ಟಡ ಬೇಕಿತ್ತು. ಬಿಷಪ್ ಫ್ಯೂಗಾ ಹಿಂದೆ ಮುಂದೆ ಯೋಚಿಸದೇ ಆಗ ತಾನೇ ನಿರ್ಮಾಣವಾಗಿದ್ದ ಬಿಷಪ್‍ರ ಬಂಗಲೆಯನ್ನೇ(ಇಂದಿನ ಆಡಳಿತ ವಿಭಾಗ ಕಟ್ಟಡ) ಕಾಲೇಜು ನಡೆಸಲು ಬಿಟ್ಟುಕೊಟ್ಟು, ಎರಡೇ ಕೊಠಡಿಯುಳ್ಳ ಸಂತ ಫಿಲೋಮಿನಾ ಕ್ಯಾಥಡ್ರಲ್ ಕಟ್ಟಡಕ್ಕೆ ನಡೆದುಬಿಟ್ಟರು. ಹೊಸ ಮನೆ ನಿರ್ಮಾಣವಾಗುವವರೆಗೂ ಅಲ್ಲೇ ವಾಸವಿದ್ದರು. ಶಿಕ್ಷಣಕ್ಕಾಗಿ ತನ್ನ ಭವ್ಯ ಬಂಗಲೆಯನ್ನೆ ಬಿಟ್ಟುಕೊಟ್ಟ ಸ್ನೇಹಿತನ ಔದಾರ್ಯತೆ ನೋಡಿದ ಹೆಚ್.ಹೆಚ್.ಚಾಮರಾಜ ಒಡೆಯಾರ್, ಬಂಗಲೆಗೆ ಹೊಂದಿಕೊಂಡಂತೆ 29 ಎಕರೆ ಪ್ರದೇಶವನ್ನು ದಾನವಾಗಿ ನೀಡಿದರು. ಅಲ್ಲದೇ, ನೇಮಕಾತಿಯ ಖರ್ಚು ಭರಿಸಲು ಅನುದಾನ ನೀಡಿದರು. ಇದೆಲ್ಲದರ ಫಲವಾಗಿ, 1946ರ ಜೂನ್ 6ರಂದು ಬಿಷಪ್ ಫ್ಯೂಗಾರ ಕನಸಿನ ಕೂಸಾದ ಸಂತ ಫಿಲೋಮಿನಾ ಕಾಲೇಜು ತಲೆಎತ್ತಿತು.
ಸಂತ ಫಿಲೋಮಿನಾ ಕಾಲೇಜು ಆರಂಭವಾದ ದಿನಗಳಲ್ಲಿ ಕಾಲೇಜಿನ ಪ್ರಾಂಶುಪಾಲರಾದ, ರೆ. ಫಾ. ಸಿ.ಎ ಬ್ರೌನ್, ರೆ.ಮೌರಿಸ್ ಕ್ವಾಗ್ವಿನರ್, ರೆ. ಎ.ಕ್ಯಾಪೆಲ್, ರೆ. ಫಾ. ಆಡಿಯೋರಂತಹ ಮಹಾನ್ ವ್ಯಕ್ತಿಗಳು ಬಿಷಪ್ ಫ್ಯೂಗಾರಿಗೆ ಸಂಸ್ಥೆಯನ್ನು ಬೆಳೆಸಲು ಹೆಗಲು ನೀಡಿದ್ದಾರೆ. 1952ರಲ್ಲಿ ಪ್ರಾಂಶುಪಾಲ ಹುದ್ದೆಯನ್ನು ಅಲಂಕರಿಸಿದ ಇವರು 1960ರವರೆಗೂ ಯಶಸ್ವಿಯಾಗಿ ನಿಭಾಯಿಸಿದರು. 1960ರಲ್ಲಿ ಇವರು ಫ್ರಾನ್ಸ್‍ಗೆ ಮರಳಬೇಕಾಯಿತು. ಕಾಲೇಜು ಮುನ್ನಡೆಸಲು ಅಗತ್ಯವಿದ್ದ ಅನುದಾನಕ್ಕಾಗಿ ಯುರೋಪ್ ಮತ್ತು ಅಮೇರಿಕಾಗಳಲ್ಲಿನ ಹಲವು ಸ್ಥಳಗಳಿಗೆ ಬಿಷಪ್ ಫ್ಯೂಗ್ ಭೇಟಿಕೊಟ್ಟರು. ಅಂದಿನ ಫೋಪ್ ಪಿಯುಸ್ 12, ಬಿಷಪ್‍ರನ್ನು ಹರಸಿ, ಕಾಲೇಜು ಯೋಜನೆಗೆ ಒಪ್ಪಿಗೆ ನೀಡಿದರು. ಜೊತೆಗೆ ತಮ್ಮ ಕೈಬರಹದಲ್ಲಿ ಸಂದೇಶ ಕೊಟ್ಟರು. ಆ ಸಂದೇಶ ಹೀಗಿದೆ, “ಅರಿವಿಗಾಗಿನ ನಿಮ್ಮ ಪ್ರೀತಿ ಶ್ರೀಮಂತಗೊಳ್ಳಲಿ”. ಈ ಸಂದೇಶ ಇಂದಿಗೂ ಬಿಷಪ್‍ರ ಬಂಗಲೆಯ ಪಟದ ಮೇಲೆ ಇರಿಸಲಾಗಿದೆ. ಫ್ರೆಂಚ್ ಭಾಷೆಯಲ್ಲಿ ಇದ್ದ ಸಂದೇಶದ ಮೊದಲ ಮತ್ತು ಕೊನೆಯ ಪದಗಳನ್ನು ಆರಿಸಿ, ಬಿಷಪ್ ಒಂದು ಸಂದೇಶ ರಚಿಸಿದರು. ‘ಪ್ರೀತಿಯಿಂದ ಅರಿವು/ಜ್ಞಾನ’ ಅದುವೇ ಕಾಲೇಜಿನ ಧ್ಯೇಯವಾಕ್ಯವಾಯಿತು.
ಬಿಷಪ್ ಫೇಗ್, ಕಾಲೇಜಿನ ಆಡಳಿತ ನಿರ್ವಹಣೆ ಮತ್ತು ಬೋಧನೆಗಾಗಿ ಎಂಇಪಿ ಮತ್ತು ಡಯಾಸಿಸ್ ಪಾದ್ರಿಗಳನ್ನು ನೇಮಿಸಿ, ಆರ್ಥಿಕ ನೆರವು ನೀಡಿದರು. ಅವರು ಉಳಿದುಕೊಳ್ಳಲು ಹಾಸ್ಟಲ್‍ಗಳನ್ನು ನಿರ್ಮಿಸಿದರು. ಉನ್ನತ ಶಿಕ್ಷಣಕ್ಕಾಗಿ ಕೆಲವು ಪಾದ್ರಿಗಳನ್ನು ಕೇಂಬ್ರಿಡ್ಜ್ ಮತ್ತು ರೋಮ್‍ಗಳಿಗೆ ಕಳುಹಿಸಿದರು. ಐದು ಮಂದಿ ಸ್ಥಳೀಯ ಪಾದ್ರಿಗಳಿಗೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆಯಲು ಅವಕಾಶ ಮಾಡಿಕೊಟ್ಟರು. ಅವರೆಲ್ಲ ಸ್ನಾತಕೋತ್ತರ ಪದವಿ ಪಡೆದ ಬಳಿಕೆ ಸಂತ ಫಿಲೋಮಿನಾ ಕಾಲೇಜಿನಲ್ಲಿಯೇ ಬೋಧಕರಾಗಿ ಸೇವೆ ಸಲ್ಲಿಸಬೇಕು ಎಂಬ ಉದ್ದೇಶ ಬಿಷಪ್ ಪೇಗ್‍ರವರದಾಗಿತ್ತು. ಕಾಲೇಜಿನ ಹಿರಿಯ ವಿದ್ಯಾರ್ಥಿಗಳಲ್ಲಿ ಒಬ್ಬರಾದ, ಫಾ.ಎನ್.ಟಿ. ಥಾಮಸ್ 1960ರಲ್ಲಿ ಕಾಲೇಜಿನ ಪ್ರಾಂಶುಪಾಲ ಹುದ್ದೆ ಅಲಂಕರಿಸಿದರು. ರೆ. ಫಾ.ಬ್ರೌನ್ ಅವರು ದಾಖಲಿಸಿರುವ ಪ್ರಕಾರ ಬಿಷಪ್ ಫೇಗ್, ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ಆರ್ಮಿ ಆಸ್ಪತ್ರೆಯನ್ನು ವಿಜ್ಞಾನ ಪ್ರಯೋಗಾಲಯವನ್ನಾಗಿ ಪರಿರ್ವತಿಸಲು ಕೊಂಡುಕೊಂಡರು.
ಈ ಹೊತ್ತು, ಕಾಲೇಜು ತನ್ನ ಅಮೃತ ಮಹೋತ್ಸವವನ್ನು ಆಚರಿಸುವ ಹೊಸ್ತಿಲಲ್ಲಿ ಇದ್ದು, ಮಹಾನ್ ಚೇತನ, ದೂರಗಾಮಿ ಕಾಲೇಜಿನ ಸ್ಥಾಪಕ ಮತ್ತು ಪೋಷಕರಾದ ಬಿಷಪ್ ರೆನೆ ಫ್ಯೂಗಾರನ್ನು ಪ್ರೀತಿಯಿಂದ ನೆನೆಯುತ್ತ, ಗೌರವ ಸಲ್ಲಿಸುತ್ತದೆ.


ಮೋಸ್ಟ್ ರೆ. ಡಾ.ಮಥಿಯಾಸ್ ಫರ್ನಾಂಡಿಸ್


ಬಿಷಪ್ ಮಥಿಯಾಸ್ ಸಬ್ಯಾಸ್ಟಿಯಸ್ ಫ್ರ್ಯಾನ್ಸಿಸ್ಕೊ ಪರ್ನಾಂಡಿಸ್ ಮೈಸೂರು ಡಯಾಸಿಸ್‍ನ ಎರಡನೇ ಬಿಷಪ್ ಮತ್ತು ಬಿಷಪ್ ಮಥಿಯಾಸ್ ಫರ್ನಾಂಡಿಸ್ ಎಂದೇ ಚಿರಪರಿಚಿತರು. ಮೂಲತಃ ಗೋವಾದವರಾದ ಇವರು, ಅವಿಭಜಿತ ಮೈಸೂರು ಡಯಾಸಿಸ್‍ನ ಮಿಷನರಿಯಾದರು. ಶೆಟ್ಟಿಹಳ್ಳಿ ಮತ್ತು ನಾಗವಳ್ಳಿಯಂತಹ ಗ್ರಾಮಗಳಲ್ಲಿ ದುಡಿದ ಇವರು, ಬಿಷಪ್ ಆದ ಬಳಿಕ ಗ್ರಾಮೀಣ ಪ್ರದೇಶಗಳ ಉದ್ಧಾರಕ್ಕೆ ಶ್ರಮಿಸಿದರು. ಆಗ ಅಸ್ತಿತ್ವದಲ್ಲಿದ್ದ ಶೈಕ್ಷಣಿಕ ಸಂಸ್ಥೆಗಳು ಮತ್ತು ಹೊಸದಾಗಿ ಸ್ಥಾಪಿತವಾದ ಸಂಸ್ಥೆಗಳನ್ನು ಬಳಸಿಕೊಂಡು ನೂರಾರು ಗ್ರಾಮೀಣ ಭಾಗದ ಯುವಕರಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾದರು. ಹೀಗೆ ಶಿಕ್ಷಣ ಪಡೆದ ಅನೇಕರು ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು, ವೈದ್ಯರು ಮತ್ತು ಎಂಜಿನಿಯರ್‍ಗಳಾಗಿದ್ದಾರೆ. ಸಂತ ಫಿಲೋಮಿನಾ ಕಾಲೇಜನ್ನು ಬೆಳೆಸಲು ಬಿಷಪ್ ಮಥಿಯಾಸ್ ಫರ್ನಾಂಡಿಸ್ ಸಾಕಷ್ಟು ಆಸ್ತೆ ವಹಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿದ ಕರ್ನಾಟಕ ಸರ್ಕಾರ, ಇವರನ್ನು ಎರಡು ಬಾರಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‍ಗೆ ನೇಮಕ ಮಾಡಿದೆ. ಗವರ್ನರ್, ಮುಖ್ಯಮಂತ್ರಿಗಳು, ಶಿಕ್ಷಣ ತಜ್ಞರು ಮತ್ತು ಧಾರ್ಮಿಕ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಬಿಷಪ್ ಮಥಿಯಾಸ್ ಫರ್ನಾಂಡಿಸ್ ಅವರು ಸಂತ ಫಿಲೋಮಿನಾ ಕಾಲೇಜಿಗೆ ಯಾವಾಗಲೂ ಭೇಟಿ ಕೊಡುತ್ತಿದ್ದರು. ಕಾಲಕಾಲಕ್ಕೆ ವಿದ್ಯಾರ್ಥಿಗಳ ಕುರಿತು ಮಾತನಾಡುತ್ತಿದ್ದರು ಮತ್ತು ಸಿಬ್ಬಂದಿಯ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಕಾಲೇಜಿನ ಸಿಬ್ಬಂದಿ ಯಾವುದೇ ಸಮಯದಲ್ಲಿ ಪೂರ್ವ ಅನುಮತಿ ಇಲ್ಲದೆಯೂ ಸಹ ಬಿಷಪ್‍ರ ಕಚೇರಿಗೆ ಭೇಟಿ ನೀಡಬಹುದಿತ್ತು. ತಮ್ಮ ವೃತ್ತಿ ಸಂಬಂಧಿ ಸಮಸ್ಯೆಗಳ ಜೊತೆ ವೈಯಕ್ತಿಕ ಸಮಸ್ಯೆಗಳನ್ನೂ ಹೇಳಿಕೊಳ್ಳಬಹುದಾದ ವಿಶ್ವಾಸ ಹೊಂದಿದ್ದರು. ಸಿಬ್ಬಂದಿಗೆ ಬಿಷಪ್ ಒಬ್ಬ ಮಾರ್ಗದರ್ಶಕ ಮತ್ತು ಸಲಹೆಗಾರನಾಗಿದ್ದರು. ಕಾಲೇಜು ಪ್ರಾಂಗಣದಲ್ಲಿ ಉತ್ತಮ ಮೂಲಸೌಕರ್ಯಗಳನ್ನು ನೀಡಿದ ಹೆಗ್ಗಳಿಕೆ ಬಿಷಪ್ ಮಥಿಯಾಸ್ ಫರ್ನಾಂಡಿಸ್‍ರಿಗೆ ಸಲ್ಲಬೇಕು. 1966ರಲ್ಲಿ ಸುಸಜ್ಜಿತ ಸಭಾಂಗಣ ಮತ್ತು 1981ರಲ್ಲಿ ಗ್ರಂಥಾಲಯದ ನೆಲಮಹಡಿ ನಿರ್ಮಾಣವಾದವು. ಇವರ ಅವಧಿಯಲ್ಲಿಯೇ ಕಾಲೇಜು ಬೆಳ್ಳಿ ಮಹೋತ್ಸವವನ್ನು ಆಚರಿಸಲಾಯಿತು.
ಮೈಸೂರು ನಗರದಲ್ಲಿ ಸಂತ ಫಿಲೋಮಿನಾ ಕಾಲೇಜನ್ನು ಮೊದಲ ಸ್ಥಾನದಲ್ಲಿಡಲು 1985ರ ತಮ್ಮ ಕಡೆಯ ಗಳಿಗೆಯವರೆಗೆ ಕಾಲೇಜಿನ ಪೋಷಕರಾಗಿ ಶ್ರಮಿಸಿದರು. ಕಾಲೇಜಿನ ಸಿಬ್ಬಂದಿ ಮತ್ತು ಹಿರಿಯ ವಿದ್ಯಾರ್ಥಿಗಳು ಬಿಷಪ್ ಮಥಿಯಾಸ್ ಫರ್ನಾಂಡಿಸ್ ಅವರನ್ನು ಒಬ್ಬ ಮಾನವೀಯತೆಯುಳ್ಳ ಪಾದ್ರಿ ಮತ್ತು ಆಡಳಿತಗಾರ ಎಂದು ನೆನೆಯುತ್ತಾರೆ


ಮೋಸ್ಟ್.ರೆ. ಡಾ. ಫ್ರಾನ್ಸಿಸ್ ಮೈಕೆಲಪ್ಪಾ (1987-95)


ರೈಟ್ ರೆವೆ. ಡಾ. ಫ್ರಾನ್ಸಿಸ್ ಮೈಕೆಲಪ್ಪ ಬೆಂಗಳೂರು ಆರ್ಚ್ ಡಯಾಸಿಸ್‍ನ ಪಾದ್ರಿಯಾಗಿದ್ದರು. ಮೂಲತಃ ಹರೋಬೆಲೆಯವರಾದ ಇವರು ಮೇ,27,1987ರಲ್ಲಿ ಮೈಸೂರಿನ ಬಿಷಪ್ ಆಗಿ ಅಧಿಕಾರ ಸ್ವೀಕರಿಸಿದರು.
ಫಿಲಾಸಫಿ ಮತ್ತು ಥಿಯಾಲಜಿಯ ವಿದ್ಯಾರ್ಥಿಯಾದ ಇವರು ಅಮೆರಿಕದ ಮಾಕ್ರ್ವೆಟ್ ವಿಶ್ವವಿದ್ಯಾಲಯದಿಂದ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕನ್ನಡ ಸಾಹಿತ್ಯದ ಕುರಿತು ಅಧ್ಬುತ ಜ್ಞಾನ ಹೊಂದಿದ್ದ ಇವರು, ತಮ್ಮ ಭಾಷಣದಲ್ಲಿ ವಚನಗಳ ಸಾಲುಗಳನ್ನು ಉಲ್ಲೇಖಿಸುತ್ತಿದ್ದರು. ಮೈಸೂರಿನ ಸುಪ್ರಸಿದ್ಧ ಸಂತ ಫಿಲೋಮಿನಾ ಕಾಲೇಜಿನ ಮುಖ್ಯಸ್ಥರಾಗಿರಲು ಹೆಮ್ಮೆ ಪಡುತ್ತಿದ್ದ ಇವರು, ಒಬ್ಬ ಸರಳ, ವಿನಮ್ರ ಮತ್ತು ಮಾನವತಾವಾದಿಯಾಗಿದ್ದರು. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ, ಮೈಸೂರು ಡಯಾಸಿಸ್‍ನ ಇತರ ಸಂಸ್ಥೆಗಳು ಮತ್ತು ಸಂತ ಫಿಲೋಮಿನಾ ಕಾಲೇಜನ್ನು ಸಮರ್ಥವಾಗಿ ಮುನ್ನಡೆಸಿದರು. ಮಾಚ್, 17, 1993ರಲ್ಲಿ ಬಿಷಪ್ ಮೈಕಲಪ್ಪ ನಿಧನ ಹೊಂದಿದರು.


ಮೋಸ್ಟ್ ರೆವರೆಂಡ್ ಡಾ. ಜೋಸೆಫ್ ರಾಯ್ (1995-2003):


ರೈಟ್.ರೆವರೆಂಡ್ ಡಾ.ಜೋಸೆಫ್ ರಾಯ್ ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಇವರು ಮೈಸೂರಿನ ನಾಲ್ಕನೇ ಬಿಷಪ್ ಆಗಿದ್ದು, ಮೊದಲ ಸ್ಥಳೀಯ ಬಿಷಪ್ ಸಹ ಇವರೇ. ಕಾಲೇಜಿನ ಅಂಗಳದಲ್ಲಿ, ಈಗಿನ ಆಡಳಿತ ವಿಭಾಗದ ಕಟ್ಟಡದಲ್ಲಿ ಇವರಿಗೆ ಸಾಕಷ್ಟು ನೆನಪುಗಳಿವೆ. 1940ರಲ್ಲಿ ಇವರು ಸೆಮಿನರಿಯಾಗಿದ್ದಾಗ ಈ ಕಟ್ಟಡದಲ್ಲಿ ವಾಸವಿದ್ದರು. ಈ ಕಟ್ಟಡ ಹಿಂದೆ ಬಿಷಪ್ ಬಂಗಲೆ ಸಹ ಆಗಿತ್ತು. ಮೈಸೂರಿನವರೇ ಆದ ರೆ.ಡಾ.ಜೋಸೆಫ್ ರಾಯ್, ಸಂತ ಫಿಲೋಮಿನಾ ಕಾಲೇಜನ್ನು ಅದರ ಆರಂಭದ ದಿನಗಳಿಂದ ನೋಡಿದ್ದರು. 2003ರಲ್ಲಿ ಮೈಸೂರಿನ ಬಿಷಪ್ ಆಗಿ ನಿವೃತ್ತರಾಗುವವರೆಗೂ ಎಂಟು ವರ್ಷಗಳ ಕಾಲ ಕಾಲೇಜಿನ ಅಧ್ಯಕ್ಷರಾಗಿದ್ದರು. ಕಾಲೇಜಿನ ಶೈಕ್ಷಣಿಕ ಬೆಳವಣಿಗೆಯ ಅಗತ್ಯ ಅರಿತಿದ್ದ ಇವರು, ಆಗಿನ ಪ್ರಾಂಶುಪಾಲರಾಗಿದ್ದ, ರೆ.ಫಾ.ಲೆಸ್ಲಿ ಮೋರೆಸ್ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡಿದರು. ಹೊಸ ಕೋರ್ಸ್‍ಗಳ ಆರಂಭ ಮತ್ತು ಮೂಲಸೌಕರ್ಯಗಳ ಬೆಳವಣಿಗೆಗೆ ಸಹಕರಿಸಿದರು. ಇವರ ಕಾಲದಲ್ಲಿಯೇ ಗ್ರಾನೈಟ್ ಕಾಂಪೌಂಡ್ ನಿರ್ಮಾಣ ಪೂರ್ಣಗೊಂಡಿದ್ದು, ಲೈಬ್ರರಿ ವಿಭಾಗಕ್ಕೆ ಮೂರು ಅಂತಸ್ತುಗಳು ಸೇರ್ಪಡೆಯಾದವು. ಜೊತೆಗೆ ಹಸಿರು ಮರಗಳ ನಡುವೆ ಸುಂದರ ಕ್ಯಾಂಟೀನ್ ತಲೆಎತ್ತಿತು. ಇವರ ನೆರವಿನಿಂದ ಗಣಕ ವಿಜ್ಞಾನ, ಸೂಕ್ಷ್ಮಜೀವಾಣುಶಾಸ್ತ್ರ, ಜೀವರಸಾಯನಶಾಸ್ತ್ರ, ಜೀವತಂತ್ರಜ್ಞಾನಶಾಸ್ತ್ರ ವಿಭಾಗಗಳ ಪ್ರಯೋಗಾಲಯಗಳು ನಿರ್ಮಾಣಗೊಂಡವು.
ಬಿಷಪ್ ರಾಯ್‍ರ ನೇತೃತ್ವದಲ್ಲಿ ಸಂತ ಫಿಲೋಮಿನಾ ಕಾಲೇಜಿನ ಸ್ವರ್ಣಮಹೋತ್ಸವ ಆಚರಿಸಲಾಯಿತು. ಸ್ವರ್ಣ ಮಹೋತ್ಸವದ ಪ್ರಯುಕ್ತ ಸಂಸ್ಥೆಯ ಸಂಸ್ಥಾಪಕರಾದ ಬಿಷಪ್ ರೆನೆ ಫ್ಯೂಗಾ ಅವರ ಹೆಸರಿನಲ್ಲಿ ಪ್ರಾರ್ಥನಾ ಮಂದಿರ ಮತ್ತು ಸಂತ ಫಿಲೋಮಿನಾ ಪ್ರತಿಮೆಯನ್ನು ಬಿಷಪ್ ರಾಯ್‍ರ ಬೆಂಬಲ ಮತ್ತು ಪ್ರೋತ್ಸಾಹದಿಂದ ನಿರ್ಮಿಸಲಾಯಿತು. ಬಿಷಪ್ ರಾಯ್ 2003ರ ಫೆಬ್ರವರಿಯಲ್ಲಿ ಮೈಸೂರಿನ ಬಿಷಪ್ ಸ್ಥಾನದಿಂದ ನಿವೃತ್ತಿ ಹೊಂದಿದರು. ಆದರೆ, 2004ರ ಏಪ್ರಿಲ್ 8ರವರೆಗೆ ಅವರು ನಿಧನ ಹೊಂದುವವರೆಗೂ ಸಂಸ್ಥೆಯ ಜೊತೆ ಬಾಂಧವ್ಯ ಹೊಂದಿದ್ದರು.


ಮೋಸ್ಟ್ ರೆ. ಡಾ. ಥಾಮಸ್ ವಾಜುಪಿಲ್ಲೈ (2003-2017):


ರೈಟ್.ರೆ. ಡಾ. ಥಾಮಸ್ ಆಂಥೋನಿ ವಾಜುಪಿಲ್ಲೈ ಮೈಸೂರಿನ ಐದನೇ ಬಿಷಪ್ ಆಗಿದ್ದು, ಮೈಸೂರು ಮತ್ತು ಸಂತ ಫಿಲೋಮಿನಾ ಕಾಲೇಜಿಗೆ ಹೊಸಬರೇನೂ ಅಲ್ಲ. ಸಣ್ಣ ಹುಡುಗನಾಗಿದ್ದಾಗಲೇ ತಮ್ಮ ಅಂಕಲ್ ರೆ.ಫಾ.ಥಾಮಸ್ ವಾಜುಪಿಲ್ಲೈ ಅವರೊಂದಿಗೆ ಕಾಲೇಜಿಗೆ ಬರುತ್ತಿದ್ದರು. ರೆ.ಫಾ.ಥಾಮಸ್ ವಾಜುಪಿಲ್ಲೈ ಅವರು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ನಂತರ ಪ್ರಾಂಶುಪಾಲರಾದರು. ಇವರು ರೈಟ್.ರೆ. ಡಾ. ಥಾಮಸ್ ಆಂಥೋನಿ ವಾಜುಪಿಲ್ಲೈ ಅವರನ್ನು ಮೈಸೂರು ಡಯಾಸಿಸ್‍ಗೆ ಸೇರುವಂತೆ ಪ್ರೇರೇಪಿಸಿದರು. 1964ರಲ್ಲಿ ಇವರು, ಚಿಕ್ಕಮಗಳೂರಿನಲ್ಲಿ ಹೊಸದಾಗಿ ಸ್ಥಾಪನೆಯಾಗಿದ್ದ ಡಯಾಸಿಸ್‍ಗೆ ಹೋಗಬೇಕಾಗಿ ಬಂತು. ಆದರೆ, ದೇವರ ಇಚ್ಛೆಯಂತೆ ಮೈಸೂರಿನ ಐದನೇ ಬಿಷಪ್ ಆಗಿ 2003ರ ಮಾರ್ಚ್‍ನಲ್ಲಿ ಮರಳಿ ಬಂದರು.
ಬದುಕಿನ ಬಹುತೇಕ ಭಾಗ ಬಿಷಪ್ ವಾಜುಪಿಲ್ಲೈ ಶೈಕ್ಷಣಕ ರಂಗದಲ್ಲಿಯೇ ತೊಡಗಿಸಿಕೊಂಡಿದ್ದರು. ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ನಂತರ ರೋಮ್‍ನಲ್ಲಿ ಉನ್ನತ ಶಿಕ್ಷಣ ಪಡೆದರು. ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಮೋರಲ್ ಥಿಯಾಲಜಿ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಬೆಂಗಳೂರಿನ ಸಂತ ಪೀಟರ್ ಪಾಂಟಿಫಿಕಲ್ ಸಂಸ್ಥೆಯಲ್ಲಿ 1980ರಿಂದ 2003ರ ಅವಧಿಯಲ್ಲಿ ಮೋರಾಲ್ ಥಿಯಾಲಜಿಯ ಪ್ರಾಧ್ಯಾಪಕರಾಗಿದ್ದರು. ನಂತರ ಮೈಸೂರಿನ ಬಿಷಪ್ ಆಗೂವ ಮೊದಲು ಸಂಸ್ಥೆಯ ಅಧ್ಯಕ್ಷರು ಮತ್ತು ರೆಕ್ಟರ್ ಆಗಿದ್ದರು.
ಮೈಸೂರಿನಲ್ಲಿ ಇಲ್ಲದಿದ್ದರೂ, ಮೈಸೂರಿನೊಂದಿಗೆ ಹೆಚ್ಚು ಕಾಲ ನಂಟು ಹೊಂದಿದ್ದರು. ಹೀಗಾಗಿ, ಮೈಸೂರಿನ ಬಿಷಪ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕಾಲೇಜಿನ ಬೆಳವಣಿಗೆಗೆ ಹೆಚ್ಚು ಗಮನ ಹರಿಸಿದರು. ಅಂದಿನ ಪ್ರಾಂಶುಪಾಲರಾದ ರೆ.ಫಾ. ಲೆಸ್ಲಿ ಮೋರೆಸ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು. ಅದರಿಂದ ಕಾಲೇಜಿಗೆ ಉತ್ತಮ ಮೂಲಸೌಕರ್ಯ ಕಲ್ಪಿಸಲು ನೆರವಾದರು. 2008ರಲ್ಲಿ ಸ್ನಾತಕೋತ್ತರ ಕೋರ್ಸ್‍ಗಳು ಆರಂಭವಾದವು. ಅತಿ ಶೀಘ್ರದಲ್ಲಿ ಐದು ಅಂತಸ್ತಿನ ಸ್ನಾತಕೋತ್ತರ ಪದವಿ ಕಟ್ಟಡ ನಿರ್ಮಾಣವಾಯಿತು. ಅದರಲ್ಲಿ 13 ವಿವಿಧ ಸ್ನಾತಕೋತ್ತರ ಪದವಿ ವಿಭಾಗಗಳು ಮತ್ತು ಸಂಶೋಧನಾ ಕೇಂದ್ರ ತೆರೆಯಲು ಸಾಧ್ಯವಾಯಿತು. ದೂರ ಶಿಕ್ಷಣಕ್ಕೂ ಗಮನ ಹರಿಸಲಾಯಿತು. ಪ್ರಾರ್ಥನಾ ಮಂದಿರಕ್ಕೆ ಮತ್ತೆರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಯಿತು. 350 ವಿದ್ಯಾರ್ಥಿಗಳಿಗೆ ವಸತಿ ಒದಗಿಸುವ ಐದು ಅಂತಸ್ತಿನ ವಿದ್ಯಾರ್ಥಿ ನಿಲಯವನ್ನು ನಿರ್ಮಾಣ ಮಾಡಲಾಯಿತು.
ಕಾಲೇಜಿಗೆ ದೇಶ-ವಿದೇಶಗಳ ವಿದ್ಯಾರ್ಥಿಗಳನ್ನು ಸೆಳೆಯುವಂತೆ ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ಬಿಷಪ್ ವಾಜುಪಿಲ್ಲೈ ಪ್ರೋತ್ಸಾಹಿಸುತ್ತಿದ್ದರು. ಫ್ರಾನ್ಸ್, ಯುಎಸ್, ಕೆನಡಾ ದೇಶಗಳ ಜೊತೆಗೆ ಆಫ್ರಿಕಾ ಮತ್ತು ಏಷಿಯಾ ರಾಷ್ಟ್ರಗಳೂ ಸೇರಿದಂತೆ 33 ದೇಶಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಂತ ಫಿಲೋಮಿನಾ ಕಾಲೇಜಿಗೆ ಬರಲು ಆರಂಭಿಸಿದರು. ಕಾಲೇಜು ಪ್ರಖ್ಯಾತಿ ಪಡೆಯುತ್ತಿದ್ದಂತೆ 19 ವಿವಿಧ ರಾಜ್ಯಗಳ ವಿದ್ಯಾರ್ಥಿಗಳೂ ಇತ್ತ ಮುಖ ಮಾಡಿದರು.
ಬಿಷಪ್ ಥಾಮಸ್ ಆಂಥೊನಿ ವಾಜಿಪಿಲ್ಲೈ ಅವರು ಕಾಲೇಜಿನ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೇ ಕಾಲೇಜು ಶೈಕ್ಷಣಿಕವಾಗಿ ಉನ್ನತ ಮಟ್ಟ ತಲುಪಿದ್ದು. 2004ರಲ್ಲಿ ಕಾಲೇಜು ನ್ಯಾಕ್‍ನಿಂದ ಎ+ ಶ್ರೇಣಿ ಪಡೆಯಿತು. 2014ರಲ್ಲಿ ಮತ್ತೆ, 3.58 ಸಿಜಿಪಿಎ ಅಂಕಗಳನ್ನು ಪಡೆಯಿತು. 2010ರಲ್ಲಿ ಶ್ರೇಷ್ಠತೆಯ ಸಾಮಥ್ರ್ಯ (ಪೊಟೆನ್ಸಿಯಲ್ ಫಾರ್ ಎಕ್ಸಲೆನ್ಸ್)ದ ಗರಿ ಪಡೆಯಿತು. 2015ರಲ್ಲಿ ಶ್ರೇಷ್ಠ ಕಾಲೇಜು (ಕಾಲೇಜ್ ಫಾರ್ ಎಕ್ಸಲೆನ್ಸ್) ಮತ್ತು 2011ರಲ್ಲಿ ಸ್ವಾಯತ್ತತೆ ಪಡೆಯಿತು. ಈ ಎಲ್ಲ ಬೆಳವಣಿಗೆಗಳಿಂದ ಯುಜಿಸಿಯು ಕಾಲೇಜಿಗೆ ಉತ್ತಮ ಅನುದಾನ ನೀಡಿದ್ದರ ಫಲ, ಮೂಲಸೌಕರ್ಯ ಅಭಿವೃದ್ಧಿಗೆ ಸಹಕಾರಿಯಾಯಿತು. ಕಾಲೇಜಿನ ಇತರ ಅಗತ್ಯಗಳನ್ನು ಪೂರೈಸುವ ಸಲುವಾಗಿ ಮತ್ತು 1500 ಮಂದಿ ಹಿಡಿಸುವ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲಾಯಿತು. ಒಳಾಂಗಣ ಕ್ರೀಡಾಂಗಣವನ್ನು ಕಾಲೇಜಿನ ಸ್ಮಾರಕವೆಂದೇ ಕರೆಯಬಹುದು. ಇದರ ನಿರ್ಮಾಣವಾದಾಗಿನಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳ ಕಾರ್ಯಕ್ರಮಗಳು ಮತ್ತು ಎಂಡಿಎಸ್‍ನ ಹಲವು ಕಾರ್ಯಕ್ರಮಗಳು ಜರುಗುತ್ತಿವೆ.
ಬಿಷಪ್ ಥಾಮಸ್ ಆಂಥೊನಿ ವಾಜುಪಿಲ್ಲೈ ಅವರ ಅವಧಿಯಲ್ಲಿ ನೂರಾರು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಬಿಷಪ್ ವಾಜುಪಿಲ್ಲೈ ಮತ್ತು ಪ್ರಾಂಶುಪಾಲರಾದ ರೆ,ಫಾ.ಲೆಸ್ಲಿ ಮೋರೆಸ್ ಅವರ ಪರಿಶ್ರಮದ ಫಲವಾಗಿ “ಜಾಗತೀಕರಣಗೊಂಡ ಕಾಲಘಟ್ಟದಲ್ಲಿ ಧರ್ಮ, ಆಧ್ಯಾತ್ಮ ಮತ್ತು ಶಿಕ್ಷಣಕ್ಕಿರುವ ಸವಾಲುಗಳು’ ಕುರಿತ ರಾಷ್ಟ್ರೀಯ ವಿಚಾಯ ಸಂಕಿರಣವನ್ನು 2007ರಲ್ಲಿ ಆಯೋಜಿಸಲಾಗಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿದವರು ರಾಷ್ಟ್ರಪತಿ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ. 2013ರಲ್ಲಿ ಪದವೀಧರರ ದಿನದಂದೂ ಸಹ ಮುಖ್ಯ ಅತಿಥಿಯಾಗಿ ಕಾಲೇಜಿಗೆ ಆಗಮಿಸಿದ್ದರು.
ಎಲ್ಲದ್ದಕ್ಕೂ ಬಿಷಪ್ ವಾಜುಪಿಲ್ಲೈ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು. ಇವರ ಬೆಂಬಲದಿಂದ “ಹವಾಮಾನ ಬದಲಾವಣೆ- ಸರಿಯೊಂದಲಾಗದ ಸತ್ಯ, ಸ್ಥಿತಿ ಮತ್ತು ಮುಂದಿನ ದಿನಗಳು’ ಕುರಿತು ಅಂತಾರಾಷ್ಟ್ರೀಯ ಸಮಾವೇಶವನ್ನು 2017ರಲ್ಲಿ ಆಯೋಜಿಸಲಾಗಿತ್ತು. 2019ರಲ್ಲಿ ಯುಎನ್ ಸುಸ್ಥಿರ ಅಭಿವೃದ್ಧಿ ಕುರಿತು ಮತ್ತೆರಡು ಅಂತಾರಾಷ್ಟ್ರೀಯ ಸಮಾವೇಶಗಳನ್ನು ಆಯೋಜನೆ ಮಾಡಲಾಗಿತ್ತು.
ಈ ಅವಧಿಯಲ್ಲಿಯೇ ಬಿಷಪ್ ವಾಜುಪಿಲ್ಲೈ ಅವರು ಮೈಸೂರಿನ ಬಿಷಪ್ ಸ್ಥಾನದಿಂದ ಮತ್ತು ಸಂತ ಫಿಲೋಮಿನಾ ಕಾಲೇಜಿನ ಅಧ್ಯಕ್ಷರ ಹುದ್ದೆಯಿಂದ 2017ರ ಜನವರಿಯಲ್ಲಿ ನಿವೃತ್ತರಾದರು. ಬಿಷಪ್ ವಾಜುಪಿಲ್ಲೈ ಅವರ ಜೊತೆಯಲ್ಲಿ ಕಾರ್ಯ ನಿರ್ವಹಿಸಿದ ರೆ.ಫಾ.ಲೆಸ್ಲಿ ಮೋರೆಸ್ ಕಾಲೇಜನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದರು. ಮುಂದಿನ ಉತ್ತರಾಧಿಕಾರಿಗಳಿಗೆ ಆ ಶ್ರೇಷ್ಠತೆಯನ್ನು ಉಳಿಸಿಕೊಂಡು, ಕಾಲೇಜನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿಯನ್ನು ಕೊಟ್ಟು ಹೋಗಿದ್ದಾರೆ.